ಕಾವ್ಯೋನ್ಮಾದ

ದೇವತೆ ಮೈದುಂಬಿ ಬಂದಾಗ ಸಾಮಾನ್ಯ ಮನುಷ್ಯನಿಗೆ ಎಂದಿಗೂ ಅತೀತವಾದ ಕಣಿವಾಕ್ಯಗಳನ್ನು ಪೂಜಾರಿ ನುಡಿಯುವಂತೆ ಕಾವ್ಯಾಭಿಮಾನ ದೇವತೆ ಮೈದುಂಬಿ ಬಂದಾಗ ಕವಿ ತನಗಸದಳವಾದ ಕಾವ್ಯವನ್ನು ಸೃಷ್ಟಿಸುತ್ತಾನೆ ಎಂಬ ನಂಬಿಕೆ ಇದ್ದ ಕಾಲದಲ್ಲಿ ಬಳಕೆಗೆ ಬಂದ ಪದವಿದು (ಫ್ಯೂರರ್ ಪೊಯಟಿಕ್ಸ್). ಮಹಾಕೃತಿಯೊಂದನ್ನು ರಚಿಸುವಾಗ ಕವಿಗೆ ಬರುವ ಪರವಶ ಪರಿಸ್ಥಿತಿಯನ್ನು ಕಾವ್ಯೋನ್ಮಾದವೆನ್ನಲಾಗಿದೆ. ಮಹೋನ್ನತ ಕವಿಗಳ ಹೇಳಿಕೆಗಳಲ್ಲಿ ಅಸಾಮಾನ್ಯ ಅರ್ಥಪುಷ್ಟಿ, ಭಾವತೀವ್ರತೆ, ಶಬ್ದಲಾವಣ್ಯಗಳು ಕಂಡುಬಂದಾಗಲಂತೂ ಈ ವಾದದಲ್ಲಿ ನಂಬುಗೆ ಪ್ರಬಲಗೊಳ್ಳುತ್ತದೆ. ಅಲ್ಲದೆ ಕಾವ್ಯಹೇತುವೆನಿಸಿದ ಪ್ರತಿಭೆ ದೈವ ದತ್ತವಾದುದು ಎಂಬ ಮಾತಿನಲ್ಲೂ ಇದೇ ಅರ್ಥ ಅಡಗಿರುವಂತೆ ತೋರುತ್ತದೆ. ಅಂದರೆ ಕಾವ್ಯ ನಿಜವಾಗಿ ಕವಿಯ ಕೃತಿಯಲ್ಲ. ಅದನ್ನು ನುಡಿಸಿದ ಶಕ್ತಿ ದೈವಿಕವಾದುದು. ನುಡಿದ ಕವಿ ಅದರ ವಾಹಕ ಮಾತ್ರ. 'ಇಲಿಯಡ್ ಕಾವ್ಯವನ್ನು' ಉಸುರಿದವ ನಾನು, ಫೀಬಸ್ ಅಪೊಲೊ ಹೋಮರ್ ಅದನ್ನು ಬರೆದುಕೊಂಡ ಎಂಬೊಂದು ನಾಟುನುಡಿ ಬಹುಕಾಲ ಪ್ರಚಾರದಲ್ಲಿತ್ತು. 'ವೀರನಾರಾಯಣನೆ ಕವೆ, ಲಿಪಿಕಾರ ಕುವರವ್ಯಾಸ' -ಎಂಬ ಕುಮಾರವ್ಯಾಸನ ಉಕ್ತಿ ಬಹು ಪ್ರಸಿದ್ಧವಾದುದೇ ಆಗಿದೆ.

ಅತ್ಯುತ್ಕøಷ್ಟ ಸಾಹಿತ್ಯದಲ್ಲಿ ಮನುಷ್ಯಾತೀತವೆನ್ನಿಸಿಕೊಳ್ಳಬಹುದಾದಷ್ಟು ಸತ್ತ್ವವಿದೆ ಎಂಬುದಕ್ಕೆ ಮೇಲಿನ ಮಾತುಗಳು ಸಾಕ್ಷ್ಯ; ಅಂಥ ಹೇಳಿಕೆಯನ್ನು ಮಹಾಸಾಹಿತಿಯ ಶುದ್ಧ ನಮ್ರತೆಯ ಕುರುಹು ಎಂದು ಭಾವಿಸಬಹುದು. ಅತ್ಯಂತ ಘನತೆಯುಳ್ಳ ಪದಾರ್ಥಕ್ಕೂ ದೇವರಿಗೂ ಸಂಬಂಧ ಕಲ್ಪಿಸಿದರೆ ಒಳ್ಳೆಯದೇ ಹೊರತು ಕೇಡಲ್ಲ. ಆದರೆ ಕಾವ್ಯನಿರ್ಮಾಣದ ಇಡೀ ಕಾರ್ಯವನ್ನು ಭಗವಂತನಿಗೆ ಒಪ್ಪಿಸಿಕೊಟ್ಟು, ತನ್ನ ಜವಾಬ್ದಾರಿಯಾಗಲಿ ಪುರುಷ ಸಾಹಸವಾಗಲಿ ಏನೇನೂ ಇಲ್ಲವೆಂದು ಕವಿ ನಟಿಸಿದರೆ ಮಾತ್ರ ಅಪಾಯ.  

 

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ